ಚೌಧುರಿ, ಜೋಯಂತೋನಾಥ್
1908-. ಭಾರತ ಸೈನ್ಯದಳದ ಒಬ್ಬ ನಿವೃತ್ತ ದಂಡನಾಯಕ. 1965ರಲ್ಲಿ ಪಾಕಿಸ್ತಾನದ ಭಾರತದ ವಿರುದ್ಧ ಹಠಾತ್ ಯುದ್ಧ ಸಾರಿದಾಗ ತನ್ನ ಅದ್ವಿತೀಯ ಟ್ಯಾಂಕ್ ಸಮರ ಕೌಶಲದಿಂದ ಭಾರತಕ್ಕೆ ವಿಜಯವನ್ನು ತಂದುಕೊಟ್ಟ ಮಹಾಸೇನಾನಿ. ಕಲ್ಕತ್ತದ ಸುಪ್ರಸಿದ್ಧ ಬ್ಯಾರಿಸ್ಟರ್ ಅಮಿಯಾನಾಥ್ ಚೌಧುರಿಯವರ ಹಿರೇ ಮಗನಾಗಿ ಜೋಯಂತೋನಾಥರು ಜನಿಸಿದರು (10-06-1908). ಕಲ್ಕತ್ತ ಹಾಗೂ ಲಂಡನ್ನಿನಲ್ಲಿ ಪ್ರಾರಂಭದ ಶಿಕ್ಷಣ, ಒಲವು ಸೈನ್ಯದ ಕಡೆಗೆ. ಇಂಗ್ಲೆಂಡಿನ ಸುಪ್ರಸಿದ್ಧ ಸ್ಯಾಂಡ್ ಹಸ್ರ್ಟ ರಾಯಲ್ ಮಿಲಿಟೆರಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ. 1928ರ ಫೆಬ್ರುವರಿ 1ರಂದು ಭಾರತದ ಸೈನ್ಯದಲ್ಲಿ ಕಮಿಷನ್ ಪಡೆದು ಅಧಿಕಾರಿಯಾಗಿ ನೇಮಕ. ಇವರಿಗೆ ಯುದ್ಧಾನುಭವ ಲಭಿಸಿದ್ದು ಮೊದಲನೆಯ ಮಹಾಯುದ್ಧದಲ್ಲಿ (1939-45). ದೂರಪ್ರಾಚ್ಯ ಹಾಗೂ ಬರ್ಮಾ ಕ್ಷೇತ್ರಗಳಲ್ಲಿ ಮಿಂಚಿನ ವೇಗದಿಂದ ಮಂಚೂಣಿಯಲ್ಲಿ ಸೇವೆ ಸಲ್ಲಿಸಿದ ಚೌಧುರಿಯವರಿಗೆ ಸಮರದ ಕೊನೆಯಲ್ಲಿ ಒ.ಬಿ.ಇ. ಪ್ರಶಸ್ತಿ ಲಭಿಸಿದ್ದು ತೀರ ಸಹಜವಾಗಿತ್ತು. ಆ ವೇಳೆಗೆ ಅವರು ಬ್ರಿಗೇಡಿಯರ್ ಪದವಿ ಪಡೆದು ಮಲಯಾದಲ್ಲಿ ಆಡಳಿತೆಯ ಹೊಣೆಯನ್ನು ವಹಿಸಿಕೊಂಡಿದ್ದರು. ಇವರು ಭಾರತದ ಸಮಸ್ತ ಭೂ ಸೈನ್ಯದ ಅಧಿಪತಿಯಾದದ್ದು 1948ರಲ್ಲಿ. ಹೈದರಾಬಾದ್ ಸಂಸ್ಥಾನದ ವಿರುದ್ದ ಸ್ವತಂತ್ರ ಭಾರತದ ಸರ್ಕಾರ ಪೋಲಿಸ್ ಕಾರ್ಯಾಚರಣೆಯನ್ನು ಘೋಷಿಸಿದಾಗ ಅದರ ನಾಯಕತ್ವವನ್ನು ವಹಿಸಿದ್ದ ಚೌಧುರಿಯವರು ಬಲು ಕ್ಷಿಪ್ರವಾಗಿಯೂ ಅತಿ ಕಡಿಮೆ ಸಾವು ನೋವುಗಳಿಂದಲೂ ಶಾಂತಿಯನ್ನು ಸ್ಥಾಪಿಸುವುದರಲ್ಲಿ ಯಶಸ್ವಿಗಳಾದರು. ಮುಂದೆ 1948-49ರಲ್ಲಿ ಇವರು ಹೈದರಾಬಾದಿನಲ್ಲಿ ಮಿಲಿಟರಿ ಗವರ್ನರರಾಗಿಯೂ ಇದ್ದರು. 1952ರಲ್ಲಿ ಒಂದನೆಯ ಆರ್ಮಡ್ ಡಿವಿಶನ್ನಿನ ದಳಪತಿ, 1952-55ರಲ್ಲಿ ಅಡ್ಜುಟೆಂಟ್-ಜನರಲ್ ಮತ್ತು 1955-56ರಲ್ಲಿ ಚೀಫ್-ಆಫ್-ಜನರಲ್-ಸ್ಟಾಫ್ ಹುದ್ದೆಗಳಲ್ಲಿದ್ದರು. 1961ರಲ್ಲಿ ನಡೆದ ಗೋವಾ ಕಾರ್ಯಾಚರಣೆಯ ನಾಯಕತ್ವ ಚೌಧುರಿಯವರದೇ. ಕೇವಲ 30 ಗಂಟೆಗಳ ಒಳಗೆ ಗೋವಾ ಆಡಳಿತೆಯನ್ನು ಹದ್ದುಬಸ್ತಿಗೆ ತಂದು ಶಾಂತಿಸ್ಥಾಪಿಸಿದ ಚೌಧುರಿಯವರ ಚಾಕಚಕ್ಯ ಸರ್ವರ ಮೆಚ್ಚುಗೆ ಗಳಿಸಿತು.

	1962ರಿಂದ 66ರವರೆಗೆ ಚೌಧುರಿಯವರು ಭಾರತ ಭೂ ಸೈನ್ಯಗಳ ಪ್ರಧಾನ ನಾಯಕರಾಗಿದ್ದರು. ಜನರಲ್ ಪದವಿಯ ಸಮೇತ ಈ ಹುದ್ದೆ ಅವರಿಗೆ ಲಭಿಸಿತು. 1965ರ ಸೆಪ್ಟೆಂಬರ್ 1ರಂದು ಪಾಕಿಸ್ತಾನ ಆಪರೇಷನ್ ಗ್ರಾಂಡ್‍ಸ್ಲಾಮ್ ಎಂಬ ಮಹಾಯುದ್ಧ ಯೋಜನೆಯನ್ನು ಭಾರತದ ವಿರುದ್ಧ ಹಠಾತ್ತಾಗಿ ಸಾರಿತು. ಸುಮಾರು 90 ಅತ್ಯಾಧುನಿಕ ಹಾಗೂ ಬಹೂಪಯೋಗಿ ಅಮೆರಿಕನ್ ಟ್ಯಾಂಕುಗಳಿಂದ ಸಜ್ಜಿತವಾದ ಬಲ ಕಾಶ್ಮೀರ ಕಣಿವೆಗೆ ನುಗ್ಗಿತು. ಭಾರತದ ಸ್ಥಳೀಯ ಸೇನಾಬಲಗಳ ನಾಲ್ಕು ಮಡಿ ಪಾಕಿಸ್ತಾನೀ ಸೈನಿಕರು ಅಲ್ಲಿ ಭಾಗಿಗಳಾಗಿದ್ದರು. ಆಗ ಜನರಲ್, ಜೆ.ಎನ್. ಚೌಧುರಿಯವರು ಅದ್ವಿತೀಯ ರಣಕೌಶಲವನ್ನು, ಅಸಾಂಪ್ರದಾಯಿಕ ವಿಧಾನಗಳಿಂದ, ಪ್ರದರ್ಶಿಸಿ ಯುದ್ಧದಲ್ಲಿ ಹೇಗೋ ಯುದ್ಧ ವಿಧಾನದಲ್ಲೂ ಹಾಗೆ ಹೊಸ ವಿಕ್ರಮವನ್ನು ಸಾಧಿಸಿದರು. ಲಾಹೋರ್ ಹಾಗೂ ಸಯಾಲ್‍ಕೋಟೆಗಳ ಕಡೆ ಪಾಕಿಸ್ತಾನದ ಎದುರು ಯುದ್ಧವನ್ನು ಚೌಧುರಿಯವರು ಹೂಡಿದುದರಿಂದ ಶತ್ರುಸೈನ್ಯದ ಲಕ್ಷ್ಯ ಹಲವಾರು ಕಡೆ ಏಕಕಾಲದಲ್ಲಿ ಹರಿಯಬೇಕಾದಂಥ ಅನನುಕೂಲ ಸನ್ನಿವೇಶ ಒದಗಿ ಬಂತು. ಇದರಿಂದ ಭಾರತೀಯ ಸೈನ್ಯಗಳಿಗೆ ನೆಲವನ್ನು ಹಿಡಿದಿಟ್ಟುಕೊಳ್ಳುವುದು ಹಾಗೂ ತಮ್ಮ ಬಲಗಳನ್ನು ವೃದ್ಧಿಪಡಿಸಿಕೊಳ್ಳುವುದು ಎರಡೂ ಸುಲಭ ಸಾಧ್ಯವಾಯಿತು. ಈ ಯುದ್ಧದಲ್ಲಿ ನಮಗೆ ವಿಜಯ ಕೇವಲ 22 ದಿವಸಗಳಲ್ಲಿ ದೊರೆಯಿತು. ಚೌಧುರಿಯವರ ಈ ಪರಮ ಧುರೀಣತ್ವವನ್ನು ಗಮನಿಸಿದ ಸರ್ಕಾರ ಅವರಿಗೆ 1965ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

	ತಮ್ಮ ನಿವೃತ್ತಿಯ (1966) ತರುವಾಯ ಚೌಧುರಿಯವರು ಕೆನಡಾದಲ್ಲಿ ಭಾರತದ ಹೈಕಮಿಷನರ್ ಆಗಿ ಸ್ವಲ್ಪ ಕಾಲ ಇದ್ದರು (1966-69). ಅವರು ಉತ್ತಮ ಲೇಖಕರು ಹಾಗೂ ವಾಗ್ಮಿಗಳು. ಸಂಗೀತ, ಫೋಟೋಗ್ರಫಿ, ಪ್ರವಾಸಗಳಲ್ಲಿ ಅವರಿಗೆ ಅಪಾರ ಆಸಕ್ತಿ. ಚೌಧುರಿಯವರು ಏಷ್ಯದ ಅತ್ಯಂತ ಅನುಭವಸ್ಥ ಜನರಲುಗಳಲ್ಲಿ ಒಬ್ಬರು. ಸ್ವಾತಂತ್ರ್ಯಪೂರ್ವದ ಬ್ರಿಟಿಷ್ ಇಂಡಿಯನ್ ಸೇನಾ ಇಲಾಖೆಯಲ್ಲಿ ಅತ್ಯಂತ ಸಮರ್ಥರಾಗಿದ್ದ ಮೂವರು ಬ್ರಿಗೇಡಿಯರುಗಳಲ್ಲಿ ಒಬ್ಬರೆಂದು ಮನ್ನಣೆ ಪಡೆದಿದ್ದರು. ಆರ್ಮರ್ ಯುದ್ಧ ತಂತ್ರದಲ್ಲಿ ಅಗ್ರಗಣ್ಯರು, ಅವರು 1962ರಲ್ಲೇ ನಿವೃತ್ತರಾಗಿರಬೇಕಾಗಿತ್ತು. ಆದರೆ ಚೀನೀಯರು ಅದೇವರ್ಷ ನೇಫಾದ ಮೇಲೆ ದಾಳಿಮಾಡಿದಾಗ ಆ ಯುದ್ಧದಲ್ಲಿ ಆರ್ಮರ್ ಕಲೆ ಬಹು ಅಗತ್ಯವೆಂದು ವೇದ್ಯವಾಯಿತು. ಚೌಧುರಿಯವರು ಆ ವಿದ್ಯೆಯಲ್ಲಿ ಪ್ರವೀಣರಾಗಿದ್ದುದರಿಂದ ಅವರನ್ನು ಭಾರತದ ಇಡೀ ಭೂ ಸೇನಾ ಮಂಡಲಿಯ ಸರ್ವಾಧಿಪತಿಯನ್ನಾಗಿ 1966ರ ವರೆಗೂ ಇಡಲಾಗಿತ್ತು. ಅಮೆರಿಕದ ಆರ್ಮರ್ ಎಂಬ ಮಿಲಿಟೆರಿ ಜರ್ನಲ್ ಆರ್ಮರ್ ಕ್ಷೇತ್ರದಲ್ಲಿ ಜಗತ್ತಿನ ಅತಿ ಶ್ರೇಷ್ಠ ನಾಲ್ವರು ಅಧಿಕಾರಿಗಳ ಪೈಕಿ ಚೌಧುರಿಯವರು ಒಬ್ಬರೆಂದು ಪ್ರಕಟಿಸಿದೆ.
(ಎಂ.ಜಿ.ಕೆ.ಎಂ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ